ಪೌಂಡ್, ರಾಸ್ಕೋ
	1870-1964. ಅಮೆರಿಕದ ಕಾನೂನು ಶಿಕ್ಷಣ ತಜ್ಞ. ನೆಬ್ರಾಸ್ಕ ರಾಜ್ಯದ ಲಿಂಕನ್‍ನಲ್ಲಿ 1870ರ ಅಕ್ಟೋಬರ್ 27 ರಂದು ಜನಿಸಿದ ಇವರು ನೆಬ್ರಾಸ್ಕ ವಿಶ್ವವಿದ್ಯಾಲಯದಲ್ಲಿ 1888ರಲ್ಲಿ ಸಸ್ಯ ವಿಜ್ಞಾನದಲ್ಲಿ ಎ. ಬಿ. ಪದವಿ ಪಡೆದು 1889ರಲ್ಲಿ ಅದೇ ವಿಷಯದಲ್ಲಿ ಎ.ಎಂ. ಗಳಿಸಿದರು. 1889-90ರಲ್ಲಿ ಹಾರ್ವರ್ಡ್ ಕಾನೂನು ಶಾಲೆಯಲ್ಲಿ ಅಧ್ಯಯನ ಮಾಡಿ 1890ರಲ್ಲಿ ಲಿಂಕನ್‍ನಲ್ಲಿ ನ್ಯಾಯವಾದಿಯಾದರು. 1898-1907ರಲ್ಲಿ ನೆಬ್ರಾಸ್ಕ ವಿಶ್ವವಿದ್ಯಾಲಯದಲ್ಲಿ ಕಾನೂನನ್ನು ಬೋಧಿಸಿದರು. 1907-09ರಲ್ಲಿ ನಾರ್ತಾವೆಸ್ಟರ್ನ್ ವಿಶ್ವವಿದ್ಯಾಲಯದಲ್ಲೂ 1909-10ರಲ್ಲಿ ಷಿಕಾಗೋದಲ್ಲೂ 1910-37ರಲ್ಲಿ ಹಾರ್ವರ್ಡ್‍ನಲ್ಲೂ ಪ್ರಾಧ್ಯಾಪಕರಾಗಿದ್ದರು. 1916-36ರಲ್ಲಿ ಹಾರ್ವರ್ಡ್ ಕಾನೂನು ಶಾಲೆಯ ಡೀನ್ ಆಗಿದ್ದರು. ನೆಬ್ರಾಸ್ಕ ರಾಜ್ಯಾದ್ಯಂತ ಒಂದೇ ರೀತಿಯ ಕಾನೂನನ್ನು ತರಲು ಪ್ರಯತ್ನಿಸುತ್ತಿದ್ದ ಸಮಿತಿಗೆ ಇವರು ಕಮಿಷನರ್ ಆಗಿದ್ದರು. 1936ರಲ್ಲಿ ಇವರು ರೋವಿಂಗ್ ಪ್ರಾಧ್ಯಾಪಕರಾದರು. 1947ರಲ್ಲಿ ಆ ಕೆಲಸದಿಂದ ನಿವೃತ್ತರಾದ ಮೇಲೂ ಇವರು ನ್ಯಾಯ, ಪುಸ್ತಕ ಸಂಪಾದನೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ವಿಶೇಷವಾಗಿ ಕೆಲಸ ಮಾಡಿದರು. ಫಾರ್ಮೋಸದಲ್ಲಿ ಕೆಲವು ವರ್ಷ ವಾಸವಿದ್ದ ಪೌಂಡ್ ಅಲ್ಲಿಯ ರಾಷ್ಟ್ರೀಯ ಚೀನ ಸರ್ಕಾರದ ನ್ಯಾಯಾಂಗ ವ್ಯವಸ್ಥೆಯನ್ನು ನೇರ್ಪುಗೊಳಿಸುವುದರಲ್ಲಿ ನೆರವಾದರು.

	ಸಸ್ಯವಿಜ್ಞಾನದಲ್ಲೂ ಇವರ ಆಸಕ್ತಿ ಮುಂದುವರಿದಿತ್ತು. 1897ರಲ್ಲಿ ಆ ವಿಷಯದಲ್ಲಿ ಇವರು ಪಿಎಚ್.ಡಿ ಗಳಿಸಿದರು. ನೆಬ್ರಾಸ್ಕ ರಾಜ್ಯದ ಸಸ್ಯ ವಿಜ್ಞಾನ ಸರ್ವೇಕ್ಷಣೆಯ ಕೆಲಸವನ್ನೂ ಇವರು ನಿರ್ದೇಶಿಸಿದರು. ಆ ಸಮಯದಲ್ಲಿ ಇವರು ಆವಿಷ್ಕರಿಸಿದ ಕಲ್ಲು ಹೂವೊಂದಕ್ಕೆ ರಾಸ್ಕೋ ಪೌಂಡಿಯ ಎಂಬ ಹೆಸರಿಡಲಾಗಿದೆ.

	ನ್ಯಾಯಶಾಸ್ತ್ರ, ರೋಮನ್ ಕಾನೂನು, ಸಾಮ್ಯ ನ್ಯಾಯ, ಕ್ರಿಮಿನಲ್ ಕಾನೂನು, ಹೀಗೆ ಕಾನೂನಿನ ಹಲವು ಮುಖಗಳು ರಾಸ್ಕೋ ಪೌಂಡರನ ಬರವಣಿಗೆ ಮತ್ತು ಬೋಧನೆಗಳಿಂದ ಶ್ರೀಮಂತಗೊಂಡುವು. 1922ರಲ್ಲಿ ಕ್ಲೀವ್‍ಲೆಂಡ್‍ನ ಕ್ರಿಮಿನಲ್ ನ್ಯಾಯ ಸರ್ವೇಕ್ಷಣೆಯನ್ನು ನಿರ್ದೇಶಿಸಿದ ಇವರು ನ್ಯಾಯಾಲಯಗಳಲ್ಲಿ ದಕ್ಷ ಆಡಳಿತವನ್ನು ಪ್ರತಿಪಾದಿಸುತ್ತಿದ್ದರು. ಪೌಂಡ್ ಬರೆದಿರುವ ಕೆಲವು ಗ್ರಂಥಗಳು ಇವು; ರೀಡಿಂಗ್ಸ್ ಆನ್ ದಿ ಹಿಸ್ಟೊರಿ ಆಂಡ್ ಸಿಸ್ಟಮ್ ಆಫ್ ಕಾಮನ್ ಲಾ (1904), ರೀಡಿಂಗ್ಸ್ ಆನ್ ರೋಮನ್ ಲಾ (1906), ಔಟ್‍ಲೈನ್ಸ್ ಆಫ್ ಲೆಕ್ಚರ್ಸ ಆನ್ ಜೂರಿಸ್ಟ್ರೂಡೆನ್ಸ್ (1934), ದಿ ಸ್ಪಿರಿಟ್ ಆಫ್ ದಿ ಕಾಮನ್ ಲಾ (1921), ಇನ್ಟ್ರೊಡಕ್ಷನ್ ಟು ಫಿಲಾಸಫಿ ಆಫ್ ಲಾ (1922), ಲಾ ಆಂಡ್ ಮಾರಲ್ಸ್ (1924), ಕ್ರಿಮಿನಲ್ ಜಸ್ಟಿಸ್ ಇನ್ ಅಮೆರಿಕ (1930). ಇವರು ವೆಬ್ಸ್‍ಟರ್ಸ್ ನ್ಯೂ ಇಂಟರ್ ನ್ಯಾಷನಲ್ ಡಿಕ್ಷನರಿಯ (ವೆಟ್ಸಿಟರ್ ನವ ಅಂತರ ರಾಷ್ಟ್ರೀಯ ನಿಘಂಟು) ಎರಡನೆಯ ಆವೃತ್ತಿಗೆ (1934) ವಿಶೇಷ ಸಂಪಾದಕರಾಗಿದ್ದರು. 1964ರ ಜುಲೈ 1ರಂದು ಮ್ಯಾಸಚೂಸೆಟ್ಸ್‍ನ ಕೇಂಬ್ರಿಜ್‍ನಲ್ಲಿ ಪೌಂಡ್ ನಿಧನರಾದರು.
(ಎಸ್.ಎನ್.ಎಂ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ